ಕೆಂಪು ಕೋಟೆಗಳು

ಮೊಗಲ್ ಚಕ್ರವರ್ತಿಗಳ ಕಾಲದಲ್ಲಿ ಆಗ್ರ ಮತ್ತು ದೆಹಲಿಗಳಲ್ಲಿ ನಿರ್ಮಿತವಾದ ಪ್ರಸಿದ್ಧ ಕೋಟೆಗಳು. ಕೋಟೆಯ ಗೋಡೆಗಳನ್ನು ಕೆಂಪು ಮರಳುಗಲ್ಲಿನಿಂದ ಕಟ್ಟಿರುವುದರಿಂದ ಇವುಗಳಿಗೆ ಕೆಂಪು ಕೋಟೆಗಳೆಂದು ಹೆಸರು ಬಂದಿದೆ. ಎರಡು ಕೋಟೆಗಳೂ ಯಮುನಾ ನದಿಯ ದಡದ ಮೇಲಿವೆ. ಇವು ಆ ಕಾಲದ ದೊಡ್ಡ ಕೋಟೆಗಳು. ಎತ್ತರವಾದ ಈ ಕೋಟೆಗಳೂ ಇವುಗಳ ಹಲವು ಭವ್ಯ ಕಟ್ಟಡಗಳೂ ಮೊಗಲ್ ಚಕ್ರವರ್ತಿಗಳ ಆಡಳಿತ ವೈಭವದ ಸಂಕೇತಗಳಾಗಿ ಇಂದಿಗೂ ನಿಂತಿವೆ.

ಆಗ್ರದಲ್ಲಿ ಬದಲ್‍ಘರ್ ಎಂಬ ಹಳೆಯ ಕೋಟೆಯಿದ್ದ ಸ್ಥಳದಲ್ಲಿ ಅಕ್ಬರ್ ಈಗಿನ ಕೆಂಪು ಕೋಟೆಯನ್ನು ಕಟ್ಟಿಸಿದ. ಇದರ ನಿರ್ಮಾಣಕಾರ್ಯ 1566ರಲ್ಲಿ ಆರಂಭವಾಗಿ ಎಂಟು ವರ್ಷಗಳಲ್ಲಿ ಪೂರೈಸಿತು. ಯಮುನಾ ನದಿಯ ಬಲದಂಡೆಯಲ್ಲಿ ಮುಮ್ಮೂಲೆಯಾಗಿ ಕಟ್ಟಿರುವ ಈ ಕೋಟೆಯ ಸುತ್ತಳತೆ ಸು.2 1/4 ಕಿಮೀ. ಕೋಟೆಗೆ ಎರಡು ಗೋಡೆಗಳಿವೆ. ಹೊರಗೋಡೆಯ ಎತ್ತರ 40'. ಒಳಗೋಡೆ 85' ಎತ್ತರವಿದೆ. ಈ ಎರಡು ಗೋಡೆಗಳ ನಡುವೆ ಆಳವಾದ ಕಂದಕವಿದೆ. ಸುತ್ತಲೂ ಅಲ್ಲಲ್ಲಿ ಬುರುಜುಗಳುಂಟು. ಕೋಟೆಗೆ ಎರಡು ಮುಖ್ಯ ಪ್ರವೇಶದ್ವಾರಗಳಿವೆ. ಇವುಗಳಲ್ಲಿ ಒಂದು ದಿಲ್ಲಿಯ ಬಾಗಿಲು; ಇನ್ನೊಂದು ಅಮರಸಿಂಗ್ ಬಾಗಿಲು. ಶಾಹಜಹಾನನ ಆಸ್ಥಾನದಲ್ಲಿದ್ದ ಜೋಧ್‍ಪುರದ ರಾವ್ ಅಮರಸಿಂಗ ಕೋಶಾಧಿಕಾರಿಯೊಬ್ಬನನ್ನು ಕೊಂದು ಕುದುರೆಯ ಮೇಲೆ ಕೋಟೆಯಿಂದ ಹಾರಿ ತಪ್ಪಿಸಿಕೊಳ್ಳಲೆತ್ನಿಸಿ ಸಿಕ್ಕಿಬಿದ್ದು ಕೊಲೆಗೀಡಾದ. ಅವನ ಧೈರ್ಯಕ್ಕೆ ಮೆಚ್ಚಿ ಚಕ್ರವರ್ತಿ ಈ ಬಾಗಿಲಿಗೆ ಅವನ ಹೆಸರನ್ನಿಟ್ಟನಂತೆ.

ನದಿಯ ದಡದ ಮೇಲಿರುವ ಕೋಟೆಯ ಗೋಡೆಗೆ ಹೊಂದಿಕೊಂಡಂತೆ ಮೊಗಲ್ ಚಕ್ರವರ್ತಿಗಳು ಕಟ್ಟಿಸಿದ ಅನೇಕ ಅರಮನೆಗಳು ಮತ್ತು ಇತರ ಕಟ್ಟಡಗಳು ಇವೆ. ಅಕ್ಬರ್ ಅಕ್ಬರೀಮಹಲನ್ನು ಕಟ್ಟಿಸಿದ. ಆದರೆ ಅದು ಈಗ ಉಳಿದಿಲ್ಲ. ಜಹಾಂಗೀರ್ ಕಟ್ಟಿಸಿದ ಜಹಾಂಗೀರಿ ಮಹಲು ಅದಕ್ಕೆ ಹೊಂದಿಕೊಂಡಂತೆಯೇ ಇದೆ. ಇದು ಹಿಂದೂ ಶಿಲ್ಪಶೈಲಿಯನ್ನು ಅಳವಡಿಸಿಕೊಂಡ ಆ ಕಾಲದ ಮೊಗಲ್ ಶಿಲ್ಪಶೈಲಿಗೆ ಮಾದರಿಯಾಗಿದೆ. ಈ ಅರಮನೆ ಚಿನ್ನದ ರೇಕುಗಳಿಂದ, ಬಣ್ಣಗಳಿಂದ ಸಂಪೂರ್ಣವಾಗಿ ಚಿತ್ರಿತವಾಗಿತ್ತು. ಅಕ್ಬರನೇ ಇದನ್ನು ತನ್ನ ರಜಪೂತರಾಣಿಗಾಗಿ ಕಟ್ಟಿಸಿದನೆಂಬ ಒಂದು ಅಭಿಪ್ರಾಯ ಇದೆ. ಜಹಾಂಗೀರನ ರಾಣಿ ಜೋದ್‍ಬಾಯಿ ಇಲ್ಲಿ ವಾಸಿಸುತ್ತಿದ್ದಳು

ಶಾಹಜಹಾನ್ ಇಲ್ಲಿ ಅನೇಕ ಭವ್ಯವಾದ ಕಟ್ಟಡಗಳನ್ನು ಕಟ್ಟಿಸಿದ. ಜಹಾಂಗೀರಿ ಮಹಲಿನ ಉತ್ತರ ಭಾಗದಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಸಿ ತನ್ನ ವಾಸಕ್ಕೆ ಅಳವಡಿಸಿಕೊಂಡ. ಇಲ್ಲಿ ಕೆಂಪು ಮರಳುಗಲ್ಲಿನಿಂದ ಕಟ್ಟಿರುವ ವೀಕ್ಷಣಗೋಪುರದಲ್ಲಿ ಶಾಹಜಹಾನ್ ಕುಳಿತು ಆನೆಕಾಳಗವನ್ನು ವೀಕ್ಷಿಸುತ್ತಿದ್ದನಂತೆ. ಇದರ ಪಕ್ಕದಲ್ಲಿಯೇ ಉತ್ತರಕ್ಕೆ ತನ್ನ ರಾಣೀವಾಸದವರಿಗಾಗಿ ಖಾಸ್ ಮಹಲನ್ನು 1637ರಲ್ಲಿ ಶಾಹಜಹಾನ್ ಕಟ್ಟಿಸಿದ. ಅಮೃತಶಿಲೆಯಿಂದ ನಿರ್ಮಿತವಾದ ಈ ಅರಮನೆಗೆ ಹೊಂದಿಕೊಂಡಂತೆ ಇರುವ ಶೀಷ್‍ಮಹಲ್ ಅಥವಾ ಕನ್ನಡಿ ತೊಟ್ಟಿ ಅವರ ಸ್ನಾನಗೃಹವಾಗಿತ್ತು. ಇದರ ಒಳಭಾಗದ ಗೋಡೆ ಚಾವಣಿಗಳಿಗೆ ಸುಂದರವಾದ ರೀತಿಯಲ್ಲಿ ಕನ್ನಡಿಯ ಚೂರುಗಳನ್ನು ಹೊದಿಸಿದೆ. ಇಲ್ಲಿ ದೀಪವನ್ನು ಬೆಳಗಿದಾಗ ಅದರ ಪ್ರಕಾಶ ಪ್ರಜ್ವಲಿಸುತ್ತದೆ. ಖಾಸ್ ಮಹಲಿನ ಉತ್ತರಕ್ಕೆ ಕೋಟೆಗೋಡೆ ಉತ್ತರದಿಂದ ಪೂರ್ವಕ್ಕೆ ತಿರುಗುವ ಮೂಲೆಗೆ ಹೊಂದಿಕೊಂಡಂತೆ ಮುಥಾಮನ್ ಬುರುಜು ಇದೆ. ಇದು ಎರಡು ಅಂತಸ್ತುಗಳ ಕಟ್ಟಡ. ಇದರ ಮೇಲೆ ಅಷ್ಟಕೋನಾಕೃತಿಯ ಮಂಟಪವಿದೆ. ಇದನ್ನು ಮುಮ್ತಾeóï ಮಹಲಳಿಗಾಗಿ ಶಾಹಜಹಾನ್ ಕಟ್ಟಿಸಿದ. ಇದೇ ಸ್ಥಳದಲ್ಲೇ ಶಾಹಜಹಾನ್ ಸೆರೆಯಲ್ಲಿದ್ದು 1666ರಲ್ಲಿ ಕೊನೆಯುಸಿರೆಳೆದ. ಇದರ ಬಳಿಯೇ ಕೋಟೆಯ ದಿಡ್ಡಿಬಾಗಿಲಿತ್ತು. ಇದನ್ನು ಔರಂಗ್eóÉೀಬ್ ಮುಚ್ಚಿಸಿದ.

ಶಾಹಜಹಾನ್ 1637ರಲ್ಲಿ ಕಟ್ಟಿಸಿದ, ಅತ್ಯಂತ ಸುಂದರವಾದ ಕುಸುರಿ ಕೆಲಸದಿಂದ ತುಂಬಿರುವ ಕಟ್ಟಡ ದಿವಾನ್-ಇ-ಖಾಸ್. ಚಕ್ರವರ್ತಿ ಪ್ರತಿಷ್ಠಿತರನ್ನು ಎದುರುಗೊಳ್ಳುತ್ತಿದ್ದುದು ಇಲ್ಲಿ. ಮತ್ತೊಂದು ಭವ್ಯವಾದ ಕಟ್ಟಡ ದಿವಾನ್-ಇ-ಆಮ್. ಇದು ಒಂದು ವಿಶಾಲವಾದ ಅಂಗಳ. ಇದರ ಹಿಂದೆ ಎತ್ತರವಾದ ಜಗತಿಯ ಮೇಲೆ ನಲವತ್ತು ಕಂಬಗಳ ದೊಡ್ಡ ಮಂಟಪವಿದೆ. ಮಂಟಪಕ್ಕೆ ಹೊಂದಿಕೊಂಡಂತೆ ಸಿಂಹಾಸನವಿರಿಸುವ ಎತ್ತರವಾದ ತಾಣವುಂಟು. ಇದರ ಸತ್ತಲೂ ಅಮೃತಶಿಲೆಯಲ್ಲಿ ಬಣ್ಣಬಣ್ಣದ ಪ್ರಶಸ್ತ ಶಿಲೆಗಳ ತುಣುಕುಗಳನ್ನು ಹುದುಗಿಸಿ ನವುರಾಗಿ ಬಿಡಿಸಿರುವ ಕುಸುರಿಕೆಲಸ ಸುಂದರವಾಗಿದೆ. ಚಕ್ರವರ್ತಿ ನಿತ್ಯವೂ ಇಲ್ಲಿ ಕುಳಿತು ಪ್ರಜೆಗಳ ಅಹವಾಲನ್ನು ಕೇಳಿ ನ್ಯಾಯ ತೀರ್ಮಾನಿಸುತ್ತಿದ್ದ. ಸಾರ್ಸನಿಕ್ ಶೈಲಿಯಲ್ಲಿ ಶಾಹಜಹಾನ್ ಕಟ್ಟಿಸಿದ ಶುಭ್ರವಾದ ಹಾಲುಗಲ್ಲಿನ ಸರಳವೂ ಸುಂದರವೂ ಆದ ಕಟ್ಟಡ ಮೋತಿ ಮಸೀದಿ.

ಮೊಗಲರ ಭೋಗಭಾಗ್ಯಗಳ ಪರಾಕಾಷ್ಠೆಯನ್ನು ಎತ್ತಿ ಹಿಡಿಯುವ ಸ್ಮಾರಕ ದೆಹಲಿಯ ಕೆಂಪು ಕೋಟೆ. ಅದರೊಳಗಿನ ಸೌಂದರ್ಯದ ಖನಿಗಳಂತಿರುವವು ಹಾಲುಗಲ್ಲಿನ ಅರಮನೆಗಳು. ಶಾಹಜಹಾನ್ ಕಟ್ಟಿಸಿದ ಈ ಕೋಟೆ ಮತ್ತು ಅರಮನೆಗಳು 1639ರಲ್ಲಿ ಆರಂಭವಾಗಿ 9 ವರ್ಷಗಳಲ್ಲಿ ಪೂರ್ಣಗೊಂಡುವು. ಈ ಕೋಟೆಗೆ ಮುಖ್ಯವಾದ ಎರಡು ಪ್ರವೇಶದ್ವಾರಗಳಿವೆ. ಚಾಂದನೀಚೌಕಕ್ಕೆ ಎದುರಾಗಿರುವ ಬಾಗಿಲಿಗೆ ಲಾಹೋರ್ ಬಾಗಿಲು ಎಂದು ಹೆಸರಿದೆ. ಸುಂದರವಾದ ಈ ದ್ವಾರಕ್ಕೆ ಅಡ್ಡಲಾಗಿ ಒಂದು ಗೋಡೆಯುಂಟು. ಭದ್ರತೆಯ ದೃಷ್ಟಿಯಿಂದ ಔರಂಗ್‍ಜೇಬ್ ಈ ಗೋಡೆಯನ್ನು ಕಟ್ಟಿಸಿದ. ಈ ದ್ವಾರದ ಒಳಹೊಕ್ಕ ಕೂಡಲೇ ಕಾಣುವುದು ನಗಾರಿಖಾನೆ. ಇದರ ಕೆಂಪು ಮರಳುಗಲ್ಲಿನ ಗೋಡೆಗಳನ್ನು ಕಲಾತ್ಮಕವಾಗಿ ಕೊರೆಯಲಾಗಿದೆ. ಮುಂದೆ ವಿಶಾಲವಾದ ಬಯಲು; ಬಯಲ ಹಿಂದೆಯೇ ಇರುವುದು ದಿವಾನ್-ಇ-ಆಮ್, ಆಗ್ರಾದಲ್ಲಿರುವಂತೆಯೇ ಇದ್ದರೂ ಇಲ್ಲಿಯ ಸಿಂಹಾಸನದ ಜಗತಿ ಮತ್ತು ಅದರ ಹಿಂದಿನ ಗೋಡೆಗಳಲ್ಲಿ ಕಂಡುಬರುವ -ಹಾಲುಗಲ್ಲಿನಲ್ಲಿ ಅತಿ ಬೆಲೆ ಬಾಳುವ ನವರತ್ನಗಳನ್ನು ಹುದುಗಿಸಿ ಬಳ್ಳಿಗಳು, ಹೂವುಗಳು, ಹಕ್ಕಿಗಳು ಮುಂತಾದವನ್ನು ಅವುಗಳ ಸ್ವಾಭಾವಿಕ ಬಣ್ಣಗಳಲ್ಲಿ ಬಿಡಿಸಿರುವ-ಕಲೆ ಅತ್ಯಂತ ಸುಂದರವಾದ್ದು. ಸಾರ್ವಜನಿಕರು ವೀಕ್ಷಿಸಬಹುದಾದ ಸಭೆ ಸಮಾರಂಭಗಳು ನಡೆಯುತ್ತಿದ್ದುದು ಇಲ್ಲಿಯೇ.

ಈ ಅರಮನೆಗೆ ಹೊಂದಿಕೊಂಡಂತೆ ಹಲವು ಸುಂದರವಾದ ಮಹಲುಗಳಿವೆ. ದಿವಾನ್-ಇ-ಆಮ್‍ನ ಹಿಂಭಾಗದಲ್ಲಿರುವುದೇ ರಂಗಮಹಲ್. ರಾಣಿವಾಸದವರು ಇರುತ್ತಿದ್ದ ಈ ಕಟ್ಟಡ ಬಣ್ಣಬಣ್ಣದ ಅಲಂಕರಣಗಳಿಂದ ತುಂಬಿತ್ತು. ಇದರ ನಡುವೆ ಇರುವ, ಹಾಲುಗಲ್ಲಿನ ಸುಂದರವಾದ ಕಮಲದಾಕೃತಿಯ ನೀರಿನ ತೊಟ್ಟಿಯ ಮೂಲಕವೇ ಅರಮನೆಯ ಎಲ್ಲ ಭಾಗಗಳಿಗೂ ಕಾಲುವೆಗಳಿಂದ ನೀರೊದಗಿಸಲಾಗುತ್ತಿತ್ತು. ರಂಗಮಹಲಿನ ದಕ್ಷಿಣಕ್ಕಿರುವುದು ಮಮ್ತಾಜ್‍ಮಹಲ್ ಅಥವಾ ಶೀಷ್ ಮಹಲ್. ರಂಗಮಹಲಿನ ಉತ್ತರಕ್ಕೆ ಮಹಲ್-ಇ-ಖಾಸ್ ಇದ್ದು ಅದರಲ್ಲಿ ಮೂರು ಭಾಗಗಳಿವೆ. ಇದು ಚಕ್ರವರ್ತಿಯ ಸ್ವಂತ ಉಪಯೋಗಕ್ಕಾಗಿ ನಿರ್ಮಿಸಿದ ಸುಂದರವಾದ ಅರಮನೆ. ಇದರ ಗೋಡೆಗಳು, ಚಾವಣಿಗಳು ಸೂಕ್ಷ್ಮವಾದ ಕುಸರಿ ಕೆಲಸದಿಂದಲೂ ಚಿತ್ರಗಳಿಂದಲೂ ತುಂಬಿದ್ದವು. ಇದರ ನಡುವೆ ಹಾಲುಗಲ್ಲಿನ ಸುಂದರವಾದ ತೆರೆಯೂ ಅದರ ಮೇಲೆ ನ್ಯಾಯದ ತಕ್ಕಡಿಯೂ ಅದರ ಕೆಳಗೆ ಕಟ್ಟಡದ ಚರಿತ್ರೆಯನ್ನು ತಿಳಿಸುವ ಪರ್ಷಿಯನ್ ಶಾಸನಗಳೂ ಇವೆ. ಖಾಸ್ ಮಹಲಿಗೆ ಸೇರಿದಂತೆ ಅಷ್ಟಕೋನಾಕೃತಿಯ ಮಂಟಪವೊಂದಿದೆ. ಅದರಲ್ಲಿ ನಿಂತು ಚಕ್ರವರ್ತಿ ತನ್ನ ಪ್ರಜೆಗಳಿಗೆ ದರ್ಶನ ಕೊಡುತ್ತಿದ್ದ. ಆನೆಕಾಳಗ, ಕುಸ್ತಿ ಮುಂತಾದವನ್ನು ಅಲ್ಲಿಂದ ವೀಕ್ಷಿಸುತ್ತಿದ್ದ.

ಇದರ ಉತ್ತರಕ್ಕಿರುವುದು ದಿವಾನ್-ಇ-ಖಾಸ್. ಚಕ್ರವರ್ತಿ ಆಡಳಿತದ ವಿಷಯವನ್ನು ಚರ್ಚಿಸುತ್ತಿದ್ದುದು, ಪ್ರತಿಷ್ಠಿತ ವ್ಯಕ್ತಿಗಳಿಗೆ ಸಂದರ್ಶನವೀಯುತ್ತಿದ್ದುದು ಇಲ್ಲಿಯೇ. ಅರಮನೆಯಲ್ಲಿಯೇ ಪ್ರಸಿದ್ಧವಾದ ಮಯೂರಾಸನವಿದ್ದುದು ಈ ಅರಮನೆಯಲ್ಲಿಯೇ. ಕಣ್ಣು ಕೋರೈಸುವಂಥ ಅತ್ಯಂತ ಪ್ರಭಾವಪೂರ್ಣವಾದ ಚಿತ್ರಕೆಲಸ, ಕುಸುರಿ ಕೆಲಸಗಳನ್ನು ಇಲ್ಲಿ ನೋಡಬಹುದು. ಇದರ ಚಾವಣಿಯನ್ನು ಬೆಳ್ಳಿಯಿಂದ ನಿರ್ಮಿಸಲಾಗಿತ್ತು. ಇದರ ಪಕ್ಕದಲ್ಲಿ ಮನೋಹರವಾದ ಮೊಗಲ್ ಸ್ನಾನಗೃಹಗಳಿವೆ. ಇಲ್ಲಿಯೂ ಹಾಲುಗಲ್ಲಿನ ಮೇಲಿನ ಅತ್ಯಂತ ನವುರಾದ ಕುಸುರಿ ಕೆಲಸವನ್ನು ನೋಡಬಹುದು. ಇದರಿಂದಾಚೆಗೆ ಔರಂಗ್‍ಜೇóಬ್ ಕಟ್ಟಿಸಿದ ಮೋತಿ ಮಸೀದಿಯಿದೆ. ಇದು ಆಗ್ರದ ಮೋತಿ ಮಸೀದಿಯಂತೆ ಶುಭ್ರವಾದ ಹಾಲುಗಲ್ಲಿನಿಂದ ನಿರ್ಮಿತವಾಗಿದ್ದು ಸುಂದರವಾಗಿದ್ದರೂ ಇದರ ಅತಿಯಾದ ಅಲಂಕರಣದಲ್ಲಿ ಕಲಾಭಿರುಚಿ ಇಳಿಮುಖವಾಗುತ್ತಿದ್ದುದನ್ನು ಗುರುತಿಸಬಹುದು. ಅರಮನೆಯ ಉತ್ತರ ಬಾಗಿಲಿನ ಬಳಿಯಲ್ಲಿರುವ ಷಾ ಬುರುಜು ಮತ್ತೊಂದು ಸುಂದರ ಕಟ್ಟಡ.           				 
(ಎಂ.ಎಚ್.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ